ಬದುಕು ಕೊಡುವ ಭೂತಾಯಿ ಸಮೃದ್ಧ ಪೈರನ್ನು ಹೊತ್ತು, ತೆನೆ ಒಡೆಯುವ ಹಂತದಲ್ಲಿರುವಾಗ ಭೂಮಿತಾಯಿ ಗರ್ಭ ಧರಿಸಿದ್ದಾಳೆ ಎಂದು ಪರಿಗಣಿಸಿ ಅವಳಿಗೆ ಸೀಮಂತ ಮಾಡಿ ವಿಶೇಷ ಖಾದ್ಯಗಳ ನೈವೇದ್ಯ ಮಾಡಿ ಭೂತಾಯಿ ಮಡಿಲು ತುಂಬುವ ಅರ್ಥಪೂರ್ಣ ಆಚರಣೆಯೇ “ಭೂಮಿ ಹುಣ್ಣಿಮೆ”.
ನೇಗಿಲ ಯೋಗಿ ಇಡೀ ರಾತ್ರಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಭೂತಾಯಿಗೆ ಕೃತಜ್ಞನಾಗುವ ರೀತಿಯೇ ಅಭೂತಪೂರ್ವವಾದುದು. ತುಂಬಿದ ಬಸುರಿಯಾಗಿ ತನ್ನೊಳಗೆ ಹಸಿರು ಹೊದ್ದು ಕಂಗೊಳಿಸುವ ಭೂಮಿಗೆ ಉಣ್ಣಿಸುವ ಪರಿಯಲ್ಲಿರುವ ಉಪಕಾರ ಸ್ಮರಣೆಗೆ ಮತ್ತೊಂದು ಉದಾಹರಣೆಯನ್ನು ಬೇರಾವ ವಿಧದಲ್ಲೂ ನೋಡಲಸಾಧ್ಯ. ಭೂತಾಯಿ ಸಮೃದ್ಧ ಬೆಳೆಯನ್ನು ನೀಡಿ ಸಮಸ್ತ ರೈತ ಕುಲವನ್ನು ಸಂತೃಪ್ತಿಯಿಂದಿಡಲಿ.